Tuesday, April 16, 2019

ಮತದಾನ ಮಹಾದಾನ ಅನ್ನೋದೆಲ್ಲ ಬದನೆಕಾಯಿ...!


ಮತದಾನ ಮಹಾದಾನ ಅನ್ನೋದೆಲ್ಲ ಬದನೆಕಾಯಿ...!

ಬಹುಶಃ ಭಾರತದಲ್ಲಿ ನಾವು ಮತದಾನದ ಅರಿವನ್ನು ಅಥವಾ ಜಾಗೃತಿ ಮೂಡಿಸಿ ದಷ್ಟು ಕ್ರಮಬದ್ದವಾಗಿ  ಏಡ್ಸ್, ಕ್ಷಯ ಅಥವಾ ಇನ್ಯಾವುದೇ ಸಾಮಾಜಿಕ ಅರಿವನ್ನು ಮೂಡಿಸಿ ದ್ದರೇ ಇಂದು ಅದರ ಸಮಸ್ಯೆ ಖಂಡಿತ ನಿವಾರಣೆ ಆಗಿರುತ್ತಿತ್ತೇನೋ.
ರಾಷ್ಟ್ರಪತಿ ಇಂದ ಇಡಿದು ಕನ್ಯಾಕುಮಾರಿಯಲ್ಲಿ ಚಹಾ ಮಾರುವವನ ತನಕ ಒಂದಲ್ಲ ಒಂದು ರೀತಿಯಲ್ಲಿ ಮತದಾನದ ಅರಿವನ್ನು ಮೂಡಿಸುವ ಕೆಲಸವಾಗುತ್ತದೆ.

ವಾಸ್ತವಿಕ ನೆಲೆಗಟ್ಟನಲ್ಲಿ ನೋಡಿದರೆ ನಾವು ಅಂದರೆ ಮುಗ್ದ ಪ್ರಜೆಗಳು (ಅದಕ್ಕೇ ರಾಜಕಾರಣಿಗಳು ನಮ್ಮ ಮೇಲೆ ಸವಾರಿ ಮಾಡುತ್ತಿರುವುದು) ಸದುದ್ದೇಶದಿಂದ ಮೂಡಿಸಿದ ಜಾಗೃತಿ ಅನೇಕಾನೇಕ ಬಾರಿ ಮತ್ತೊಬ್ಬ  ಕ್ರಿಮಿನಲ್ ಹಿನ್ನೆಲೆಯುಳ್ಳ ಅಥವಾ ಲಂಚಕೋರ ನ ಗೆಲುವಿಗೆ ಕಾರಣವಾಗುತ್ತಿದೆ.
ಒಂದು ಕ್ಷೇತ್ರ ದಲ್ಲಿ ಇಬ್ಬರು ಅಥವಾ ಮೂರಾರು ದರಿದ್ರರು (ಅಭ್ಯರ್ಥಿ ಗಳು) ಎರಡು ಅಥವಾ ಮೂರಾರು ದರಿದ್ರ ಪಕ್ಷಗಳಿಂದ ನಿಂತರೆ ಪ್ರಜೆಗಳಿಗೆ ವಾಸ್ತವಿಕವಾಗಿ ತಿಳಿದಿದ್ದರೂ ದರಿದ್ರರನ್ನೆ ಆಯ್ಕೆ ಮಾಡಬೇಕು. ಆದರೆ ಆ ದರಿದ್ರ ಗೆದ್ದರೆ ದೇಶಕ್ಕೆ ದರಿದ್ರ ಅಲ್ಲವೇ? ಮಹಾಮಾರಿಯಾದ ಕ್ಯಾನ್ಸರ್ ಒಂದು ಕೋಷದಿಂದಲೇ ತಾನೇ ಇಡೀ ದೇಹಕ್ಕೆ ಹರಡುವುದು? ಹಾಗೆಯೇ ಆಯ್ಕೆಯಾದ ಒಬ್ಬ ದರಿದ್ರ ಮತ್ತಷ್ಟು ಜಯಶಾಲಿಗಳನ್ನು ದರಿದ್ರರನ್ನಾಗಿ ಮಾಡಬಲ್ಲ. ಇಂದು ಎಷ್ಟೋ ಕ್ಷೇತ್ರ ಗಳಲ್ಲಿ ನಿಜವಾಗಿ ನಡೆಯುತ್ತಿರುವುದು ಇದೇ. ಇದೇ ನಿಜವಾದ ಸತ್ಯ.
ನೋಟ (NOTA) ಇದೆಯಲ್ಲ ಅಂತ ನೀವೇನಾದರೂ ಅಂದರೇ.. ಅದು ಬರೀ ಗಿಮಿಕ್ ಅಷ್ಟೇ. ಅದಕ್ಕೆ ಮಾನ್ಯತೆಯೇ ಇಲ್ಲ. NOTA ಗೆ ಓಟು ಹಾಕಿದವರು ಪರಿತಪಿಸ ಬೇಕಷ್ಟೇ. ಅದು ಒಂದು ನಂಬರ್ ಮಾತ್ರ. ಅದು ಅಭ್ಯರ್ಥಿಯೂ ಅಲ್ಲ ಅಥವಾ ಅದರಿಂದ ಪ್ರಯೋಜನವೂ ಇಲ್ಲ. ಹಿಂದಿನ ಚುನಾವಣೆ ಗಳಲ್ಲಿ ಅದನ್ನೇ ಸಾವಿರ ಸಾವಿರ ಸಂಖ್ಯೆಯಲ್ಲಿ ಚಲಾಯಿಸಿರುವುದು ಈಗಿನ ರಾಜಕಾರಣಿ ಗಳಿಗೆ ನಾಚಿಗೇಡಿನ ಸಂಗತಿ. ಏನೋ ಹಸಿದ ಹೊಟ್ಟೆಗೆ ಅರೆಮಜ್ಜಿಗೆ ಎಂಬಂತೆ NOTA ಒಂದು ಸಮಾಧಾನಕರ ಆಯ್ಕೆಯಾಗಬಹುದಷ್ಟೆ.
ಮತದಾನ ಮಹಾದಾನ ಅಥವಾ ನಿಮ್ಮ ಅಮೂಲ್ಯ ಮತ ದೇಶಕ್ಕೆ ಹಿತ, ಒಂದು ಮತ ಬದಲಾವಣೆ ತರಬಲ್ಲದು, ಪ್ರಜಾಪ್ರಭುತ್ವ ದಲ್ಲಿ ನಿಮ್ಮ ಹಕ್ಕು ಇತ್ಯಾದಿ ಘೋಷಣೆಗಳೆಲ್ಲ ರಾಜಕಾರಣಿಗಳು ತಮ್ಮ ಮತ ಹೆಚ್ಚು ಮಾಡಿಕೊಳ್ಳುವುದಕ್ಕೆ (ವೋಟ್ ಬ್ಯಾಂಕ್ ಇರುತ್ತದಲ್ಲ) ಮಾಡುತ್ತಿರುವ ಸ್ವಾರ್ಥ ಘೋಷಣೆಗಳಷ್ಟೇ ಹಾಗೂ "ಮತದಾನದ ಜಾಗೃತಿಗೆ ಮಾತ್ರ ರಾಜಕಾರಣಿಗಳು ಬಿಸಿಲು ಮಳೆ ಎನ್ನದೆ "ಅವರಿಗೋಸ್ಕರ" ದುಡಿಯುವುದು ಹಾಗೂ ಮುಗ್ದ ಜನರನ್ನೂ ಹಾಗೂ ಎಲ್ಲರನ್ನೂ ದಾರಿತಪ್ಪಿಸುವುದು". ಇದು ನೇರವಾಗಿ ತಮ್ಮ ಬುಡಕ್ಕೇ ಸಮಸ್ಯೆ ತರುವುದರಿಂದ ನಮ್ಮ ಬ್ರಷ್ಟ ಹಾಗೂ ಎಲ್ಲಾ ನಾಯಕರೂ ಮತದಾರರನ್ನು ಒಲಿಸಿಕೊಳ್ಳಲು ಮಾಡುವ ಕುತಂತ್ರದ ಭಾಗವಷ್ಟೇ.
ಮತದಾನ, ಅದನ್ನು ಚಲಾಯಿಸುವ ಹಕ್ಕು ಎಲ್ಲವೂ ಒಳ್ಳೆಯದಕ್ಕೇ ಆದರೂ ಇಂದು ಅದನ್ನು ವ್ಯವಸ್ಥಿತವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುವ ಕಲೆ ನಮ್ಮ ರಾಜಕೀಯ ವ್ಯವಸ್ಥೆಗೆ ಕರಗತವಾಗಿದೆ.
ಮತದಾನ ಜಾಗೃತಿ ಎನ್ನುವುದು ಒಂದು ಕುರುಡು ಆಚರಣೆ ಯಾಗಿ ಮಾರ್ಪಾಡು ಗೊಳ್ಳುತ್ತಿದೆ ಹಾಗೂ ಜಾಗೃತಿ ಮೂಡಿಸುವವನು ತನ್ನ ಫೇಸ್ಬುಕ್ ನಲ್ಲಿಯೋ ಅಥವಾ ಮೊಬೈಲಲ್ಲಿ ಯೋ ಒಂದು ಸ್ಟೇಟಸ್ ಹಾಕಿ ತಾನು ದೇಶಸೇವೆ ಮಾಡುತ್ತಿರುವ ಹಾಗೆ ಪೋಸ್ ಕೊಡುತ್ತಿರುತ್ತಾನೆ. ವಾಸ್ತವದಲ್ಲಿ ಅವನು ಅಥವಾ ಅವಳು ಮತವನ್ನೇ ಹಾಕುವುದಿಲ್ಲ ಅಥವಾ ಯಾರಿಗೋ ತೋರಿಸಿಕೊಳ್ಳಲು ಮತ ಚಲಾಯಿಸುತ್ತಾರೆ. ಕೆಲವರಿಗೆ ಅಭ್ಯರ್ಥಿಯ ಹೆಸರೂ ಕೂಡ ಗೊತ್ತಿರುವುದಿಲ್ಲ.
ಇಷ್ಟೆಲ್ಲ ಸತ್ಯ ಆದರೂ ಪ್ರಜೆಗಳು ದಡ್ಡರೇ?
ಖಂಡಿತ ಇಲ್ಲ. ಇದಕ್ಕೆ ಉದಾಹರಣೆ, ಕಳೆದ ಬಾರಿ ಆಗಿದ್ದು ಸುಮಾರು 66 ಪರ್ಸೆಂಟ್ ಮತದಾನ ಮಾತ್ರ. ಇನ್ನು ಈ 66 ಪರ್ಸೆಂಟ್ ಮತದಾರರಲ್ಲಿ ಸುಮಾರು ಒಂದನೇ 5 ರಷ್ಟು ಜನ ಕಾಸಿನ  ರುಚಿ ನೋಡಿದ ಮೇಲೆಯೇ ಮತ ಹಾಕುವುದು. ಅದು ಕೂಡ ಸರಿಯಾಗಿ ನೋಡಿದರೆ ತಪ್ಪಲ್ಲ ಬಿಡಿ. ಚುನಾವಣೆ ಮುಗಿದ ಮೇಲೆ ಅವರನ್ನು ಕೇಳುವವರೇ ಇರುವುದಿಲ್ಲ ಅಲ್ಲವೇ...? ಅದಕ್ಕೆ ಆತ ಪಾಲಿಗೆ ಬಂದದ್ದು ಪಂಚಾಮೃತ ಎಂದು ಪ್ರೀತಿಯಿಂದ ಕೊಟ್ಟಿದ್ದನ್ನು ತೆಗೆದು ಕೊಳ್ಳದಿದ್ದರೆ ತಪ್ಪಾದೀತು ಅಲ್ಲವೇ?
ಹಾಗಿದ್ದರೆ ಮತದಾನ ಮಾಡುವುದು ತಪ್ಪೇ? ಖಂಡಿತ ಇಲ್ಲ. ಮತದಾನಕ್ಕೆ ಮುಂಚೆ ಸ್ವಲ್ಪ ಯೋಚಿಸಿ. ಸ್ವಲ್ಪ ತಿಳಿದುಕೊಳ್ಳಿ. ಸ್ವಲ್ಪ ವಿಚಾರಿಸಿ, ಸ್ವಲ್ಪ ಓದಿಕೊಳ್ಳಿ. ಅರ್ಹರನ್ನು ನಾವು ಹಾರಿಸುವ ಅವಕಾಶ ಸಿಗುತ್ತದೆಯೋ ಇಲ್ಲವೋ. ಸಿಕ್ಕ ಅವಕಾಶದಲ್ಲಿ ಉತ್ತಮರನ್ನು ಹಾರಿಸಿ.

ಆದರೆ ನಿಮ್ಮ ಜನ ನಾಯಕನನ್ನು ಆರಿಸಿದ ಮೇಲೆ ಅವನನ್ನು ಬಿಡಬೇಡಿ... ಕೆಲಸ ಮಾಡದಿದ್ದರೆ ಮಾಡಿಕೊಡುವ ತನಕ ಬಿಡಬೇಡಿ..
Elect and forget (ಚುನಾಯಿಸಿ ಮರೆಯುವುದು) ಕಡೆಯಿಂದ Elect and engage (ಚುನಾಯಿಸಿ  ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವುದು) ಕಡೆಗೆ ನಿಮ್ಮ ಪಯಣ ಸಾಗಲಿ.
ನಿಧಾನವಾಗಿಯಾದರೂ ಭಾರತ ಖಂಡಿತ ಬದಲಾವಣೆಯಾಗುತ್ತದೆ. ನಿಮ್ಮ ಕಾಲ ಮುಗಿಯಿತು ಅದು ನಿಮ್ಮ ಕರ್ಮ. ಮುಂದಿನ ನಿಮ್ಮ ಮಕ್ಕಳಿಗೆ ಆದರೂ ನಿಮ್ಮ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಇರಲಿ.

ದಯವಿಟ್ಟು ಮತದಾನ ಮಾಡಿ ಹಾಗೂ ಮೇಲೆ ಹೇಳಿದ್ದನ್ನು ಮರೆಯಬೇಡಿ.

ಜೈ ಹಿಂದ್

ಅಜಯ್ ರಾಮಚಂದ್ರ
ಸ್ವತಂತ್ರ ಚಿಂತಕ
ಹುಣಸನಹಳ್ಳಿ, ಕನಕಪುರ

No comments:

Post a Comment

Please introduce your self before you comment, thanks !!!